ಸಿಎಎ ಪರ ಜನಜಾಗೃತಿಗೆ ತಡೆ: ಬಿಜೆಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಹೊಸಪೇಟೆ ಜನತೆ…
ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಜನಜಾಗೃತಿ ಮೂಡಿಸಲು ಮನೆ ಮನೆ ಭೇಟಿಗೆ ತೆರಳಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ತಡೆದು ಧಿಕ್ಕಾರದ ಘೋಷಣೆ ಕೂಗಿ ವಾಪಸ್ ಕಳಿಸಿದ ಘಟನೆ ಇಂದು ಹೊಸಪೇಟೆಯಲ್ಲಿ ಜರುಗಿದೆ.
ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಮುಖಭಂಗವುಂಟಾಗಿದ್ದು ಒಂದು ಕರಪತ್ರ ಹಂಚದೆ ವಾಪಸ್ ತೆರಳಬೇಕಾಗ ಪರಿಸ್ಥಿತಿ ಉಂಟಾಗಿದೆ.
ಹೊಸಪೇಟೆಯ ಚಲವಾದಿಕೇರಿ ಓಣಿಗೆ ಇಂದು ಬೆಳಿಗ್ಗೆಯೇ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಿಎಎ ಪರ ಪ್ರಚಾರಕ್ಕೆ ಹೊರಟಿದ್ದರು. ಬಿಜೆಪಿ ಕಾರ್ಯಕರ್ತರು ಬರುವ ವಿಷಯ ಗೊತ್ತಾಗುತ್ತಿದ್ದಂತೆ ಓಣಿಯ ಪ್ರವೇಶ ದ್ವಾರ ಬಳಿ ಸೇರಿದ ಸ್ಥಳೀಯ ನಿವಾಸಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್, ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.
ಅಲ್ಲದೇ ಬಿಜೆಪಿ, ಆರ್‌ಎಸ್‌ಎಸ್‌ನಿಂದ ಆಜಾದಿ, ಹಿಂದೂಸ್ತಾನ್ ಜಿಂದಾಬಾದ್, ಸಂವಿಧಾನ ಜಿಂದಾಬಾದ್ ಘೋಷಣೆಗಳನ್ನು ಕೂಗಿ ಓಣಿಗೆ ಪ್ರವೇಶ ನೀಡದೇ ತಡೆದಿದ್ದಾರೆ. ‘ನಾವು ಕರಪತ್ರಗಳನ್ನು ಕೊಟ್ಟು ಹೋಗಲು ಬಂದಿದ್ದೇವೆ. ಅದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರೂ ಅದಕ್ಕೆ ಸೊಪ್ಪು ಹಾಕದ ಸ್ಥಳೀಯರು ನೀವು ಇಲ್ಲಿಗೆ ಬರುವುದೇ ಬೇಡ, ನಿಮಗೆ ಪ್ರವೇಶವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಎರೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಬಂದಿದ್ದು, ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು. ನಾವು ಪ್ರಚಾರ ನಡೆಸಿಯೇ ಸಿದ್ದ ಎಂದು ಓಣಿ ಪ್ರವೇಶಿಸಿಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಜನರು ತಡೆದಿದ್ದಾರೆ. ಸ್ಥಳದಲ್ಲಿ ಪರಸ್ಪರ ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರು ಅಸಹಾಯಕರಾಗಿ ಬಿಜೆಪಿಯವರಿಗೆ ಬುದ್ದಿ ಹೇಳಿದ್ದಾರೆ.
ಓಣಿಯಲ್ಲಿ ದಲಿತರು, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮಗೆ ಸಿಎಎ, ಎನ್‌ಆರ್‌ಸಿ ಬೇಡ. ಹಿಂದೂ ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಈ ದೇಶ ನಮ್ಮದು. ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇವೆ. ನೀವು ಇಲ್ಲಿ ಬಂದು ನಮ್ಮ ಸೌಹಾರ್ದ ಬದುಕಿಗೆ ಕೊಳ್ಳಿ ಇಡಬೇಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನೂ ಮಾಡಿದರೂ ಇಲ್ಲಿ ಪ್ರಚಾರ ಸಾಧ್ಯವಿಲ್ಲ ಎಂದು ಅರಿತ ನಂತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೆಲ್ಲಗೆ ಒಬ್ಬಬ್ಬರಾಗಿ ಸ್ಥಳದಿಂದ ಕೊನೆಗೂ ನಿರ್ಗಮಿಸಿದ್ದಾರೆ. ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.
0 Comments